ಪುದುಚೇರಿ ಸರ್ಕಾರವು ತಮ್ಮ ಗೌರವಾರ್ಥ ಆಯೋಜಿಸಿದ್ದ ನಾಗರಿಕ ಸನ್ಮಾನ (ಪೌರ ಸನ್ಮಾನ) ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಭಾಗವಹಿಸಿದ್ದರು. ಅವರು ಇಂದು (ಆಗಸ್ಟ್ 7, 2023) ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್ಮರ್) ನಲ್ಲಿ ಲೀನಿಯರ್ ಆಕ್ಸಿಲರೇಟರ್ ಉದ್ಘಾಟಿಸಿದರು. ಹಾಗು ಅವರು ವಿಲಿಯನೂರಿನಲ್ಲಿ 50 ಹಾಸಿಗೆಗಳ ಆಸ್ಪತ್ರೆಯನ್ನು ವರ್ಚುವಲ್ ವಿಧಾನದ ಮೂಲಕ ಉದ್ಘಾಟಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಪುದುಚೇರಿಯಲ್ಲಿ ನಾವು ವೈವಿಧ್ಯಮಯ ಸಾಂಸ್ಕೃತಿಕ ಧಾರೆಗಳ ಸಮ್ಮಿಶ್ರಣವನ್ನು ನೋಡುತ್ತಿದ್ದೇವೆ. ಇಲ್ಲಿ ಫ್ರೆಂಚ್ ಪ್ರಭಾವದ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳಿ ಪ್ರಭಾವಗಳು ಗೋಚರಿಸುತ್ತಿವೆ ಎಂದು ಅವರು ಹೇಳಿದರು. ವಾಸ್ತುಶಿಲ್ಪ, ಹಬ್ಬಗಳು ಮತ್ತು ಜೀವನಶೈಲಿಗಳು ಸಾಮರಸ್ಯದೊಂದಿಗೆ ಬೆರೆಯುವ ವೈವಿಧ್ಯಮಯ ಪ್ರಭಾವಗಳನ್ನು ಪ್ರತಿಬಿಂಬಿಸುತ್ತಿವೆ ಎಂದು ಅವರು ಹೇಳಿದರು.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದೆ ಎಂದು ರಾಷ್ಟ್ರಪತಿ ಹೇಳಿದರು. ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ಪುದುಚೇರಿಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾಜಿಕ ಪ್ರಗತಿ ಸೂಚ್ಯಂಕ ಸ್ಕೋರ್ 2022 ರಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ಪ್ರಸ್ತಾಪಿಸಿದ ಅವರು ಇದು ಸಂತೋಷದ ಸಂಗತಿ ಎಂದರು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆ, ವಸತಿ, ನೀರು ಮತ್ತು ನೈರ್ಮಲ್ಯದ ಮಾನದಂಡಗಳಲ್ಲಿ ಅದು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದೂ ಅವರು ಹೇಳಿದರು. ಪುದುಚೇರಿ ದೇಶದಲ್ಲಿ ಅತಿ ಹೆಚ್ಚು ಸಾಕ್ಷರತಾ ಪ್ರಮಾಣವನ್ನು ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ ಮತ್ತು ಲಿಂಗ ಅನುಪಾತವು ಮಹಿಳೆಯರಿಗೆ ಅನುಕೂಲಕರವಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಪುದುಚೇರಿಯ ಜನರು ಲಿಂಗ ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಈ ಸಂಗತಿಗಳು ತೋರಿಸುತ್ತವೆ ಎಂದು ಅವರು ನುಡಿದರು. ಅಭಿವೃದ್ಧಿ ಮತ್ತು ಪ್ರಗತಿಗೆ ಸಂಬಂಧಿಸಿ ಆಧುನಿಕ ಮತ್ತು ಸೂಕ್ಷ್ಮ ಧೋರಣೆಯನ್ನು ಹೊಂದಿರುವುದಕ್ಕಾಗಿ ಪುದುಚೇರಿಯ ನಿವಾಸಿಗಳನ್ನು ಅವರು ಶ್ಲಾಘಿಸಿದರು.
ಪುದುಚೇರಿ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಅದ್ಭುತ ತಾಣವಾಗಿದೆ, ಮತ್ತು ಈ ಪ್ರವೃತ್ತಿ ಇಂದು ವೇಗವಾಗಿ ಜಾಗತಿಕ ಪ್ರವೃತ್ತಿಯಾಗಿ ರೂಪುಗೊಳ್ಳುತ್ತಿದೆ ಜೊತೆಗೆ ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬಲವಾದ ಉತ್ತೇಜನ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಾಷ್ಟ್ರಪತಿ ಹೇಳಿದರು. ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ, ಆರೋಗ್ಯ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೂ ಸಹ ಉತ್ತೇಜನ ಲಭಿಸುತ್ತದೆ ಎಂದು ಅವರು ಹೇಳಿದರು
source :- PIB